Monday, August 10, 2009

Yaak nirdayanaade

ಯಾಕೆ ನಿರ್ದಯನಾದೆ ಎಲೊ ದೇವನೆ ಪ
ಶ್ರೀ ಕಾಂತ ಎನಮೇಲೆ ಎಳ್ಳಷ್ಟು ದಯವಿಲ್ಲ ಅ ಪ

ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು

ಹಿಂಗದೆ ಪ್ರಹ್ಲಾದನಪ್ಪಿಕೊಂಡೆ
ಮಂಗಳಪದವಿತ್ತು ಮನ್ನಿಸಿದೆ ಅವ ನಿನಗೆ
ಬಂಗಾರವೆಷ್ಟು ಕೊಟ್ಟನು ಪೇಳೊ ಹರಿಯೆ ೧

ಸಿರಿದೀವಿಗಹೀಲದೆ ಸೆರಗು ಸಂವರಿಸಿದೆ
ಗರುಡನ ಮೇಲೆ ಗಮನವಾಗದೆ
ಭರದಿಂದ ನೀ ಬಂದು ಕರಿಯನುದ್ಧರಿದೆ
ಕರಿರಾಜ ಎಷ್ಟು ಕನಕವ ಕೊಟ್ಟ ಹರಿಯೆ ೨

ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೇ
ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೆ
ಭಜನೆಗವರೇ ಹಿತರೆ ನಾ ನಿನಗೆ ಅನ್ಯನೇ
ತ್ರಿಜಗಪತಿ ಸಲಹೆನ್ನ ಪುರಂದರವಿಠಲ ೩

Yeke malagihe hariye

ಏಕೆ ಮಲಗಿಹೆ ಹರಿಯೆ ಏಸು ಆಯಾಸ
ಜೋಕೆ ಮಾಡುವ ಬಿರುದು ಸಾಕಾಯಿತೇನೊ IIಪII

ತಮನೊಡನೆ ಹೋರಾಡಿ ತಪಿಸಿ ಮೈ ಬೆವರಿತೊ
ಅಮೃತಮಥನದಿ ಗಿರಿಯು ಅತಿ ಭಾರವಾಯ್ತೊ
ರಮಣಿಯನು ತರುವಾಗ ರಣರಂಗ ಬಹಳಯ್ತೊ
ಅಮರರಿಪುವನು ಸೀಳೆ ಆಯಾಸವಾಯ್ತೊ II೧II

ಅಕಾಶ ಭೇದಿಸಲು ಆ ಕಾಲು ಉಳುಕಿತೊ
ಕಾಕುನೃಪರನು ಸೀಳಿ ಕರ ಸೋತಿತೊ
ಭೂದೇವಿಯನರಸಿ ಬಳಲಿಕೆಯು ಬಹಳಾಯ್ತೊ
ಲೋಕಭಾರವ ಇಳುಹಿ ಸಾಕುಸಾಕಾಯ್ತೊ II೨ II

ಚಪಲೆಯರ ಮೋಹಿಸಲು ಉಪಟವು ಬಹಳಯ್ತೊ
ಅಪವಿತ್ರವನಡಗಿಸಲು ಅಧಿಕ ಶ್ರಮವಾಯ್ತೊ
ಕೃಪೆಮಾಡಿ ನೋಡೈಯ್ಯ ಕಣ್ಣುತೆರೆದು ಎನ್ನಕಡೆ
ಕಪಟನಾಟಕ ಶ್ರೀ ಗೋಪಾಲವಿಠಲ II೩II

Vadiraajamunipa

ವಾದಿರಾಜಮುನಿಪ ಹಯಮುಖ
ಪಾದಕಮಲ ಮಧುಪ IIಪII

ನೀ ದಯದಲಿ ತವಪಾದಧ್ಯಾನವನು
ಆದರದಲಿ ಕೊಟ್ಟಾದರಿಸೆನ್ನನು IIಅಪII

ಮೂಷಕಬಿಲದಿಂದ ಉದರ ಪೋಷಕ ಬರಲಂದು
ವಾಸುಕಿ ಭಯದಿ ನಿಮ್ಮಾಸನದೆಡೆ ಬರೆ
ಕ್ಲೇಶ ಕಳೆದು ಸಂತೋಷಗೈಸಿದೆ II೧II

ಮುಂದೆ ಭೂತನರನ ಪ್ರೇರಿಸಿ ಹಿಂದೆ ಒಬ್ಬ ನರನ
ನಿಂದರಿಸಿ ಆನಂದದಿಂದ ಜನ-
ವೃಂದ ನೋಡುತ್ತಿರೆ ಅಂದಣ ನಡೆಸಿದ್ಯೊ II೨II

ಶಾಸ್ತ್ರ ಪ್ರಸಂಗದಲಿ ನಾರಾಯಣಭೂತರ ಗೆಲಿದಲ್ಲೆ
ಖ್ಯಾತಿಯಿಂದ ಬಹು ಮಾತನಾಡಿ

ಶ್ರೀನಾಥನ ಮಂದಿರ ಪ್ರೀತಿಲಿ ತರಿಸಿದ್ಯೊ II೩II

ತುರಗವದನ ಪಾದ ಭುಜಗಳಲಿ
ಧರಿಸಿಕೋಂಡು ಮೋದ ಕಡಲೆಮಡ್ಡಿಯನು
ಕರದಿಂದುಣಿಸಿದ ಗುರುವರಶೇಖರ II೪II

ಆ ಮಹಾ ಗೋಪಾಲವಿಠಲ ತಾಮರಸದಳಗಳ
ಧೀಮಂತರಿಗೆ ಸುಕಾಮಿತವನು ಕೊಡುವ
ಆ ಮಹಾಮಹಿಮ II೫II
ರಾಮ ನಾಮವ ನೆನೆ ಮನವೆ ಪ
ರಾಮ ಎಂದವನೆ ಧನ್ಯನೆಂದು ಶೃತಿತತಿಗಳು ಪೊಗಳುತಿರೆ ಅ ಪ

ತರುಣತನದಿ ದಿನದಾಟಿತು ಸುಮ್ಮನೆ
ಶರೀರದೊಳು ಸ್ವರವಾಡುತಲೆ
ತರುಣಿ ಸುತರು ಸಂಸಾರವೆಂಬ
ಶರಧಿಯೊಳಗೆ ಮುಳುಗಿರದೆ ಮನವೆ ೧

ಬಗೆ ಬಗೆ ಜನ್ಮದಿ ಜನಿಸಿದೆ ನಾಳೆಗೆ
ಸಿಗುವುದೆ ನಿಜದಿಂ ಈ ಸಮಯ
ಮುಗುಧನಾಗಿ ಮತ್ತೆ ಜನಿಸಿ ಬರುವುದು
ಸೊಗಸು ಕಾಣುವುದೆ ಛೀ ಮನವೆ ೨

ಚಿಂತೆಯನೆಲ್ಲ ಒತ್ತಟ್ಟಿಗೆ ಇಟ್ಟು
ಅಂತರಂಗದಲಿ ಧ್ಯಾನಿಸುತ
ಕಂತುಪಿತ ಕನಕಾದಿಕೇಶವನ
ಎಂತಾದರೂ ನೀ ಬಿಡಬೇಡ ಮನವೆ 3II

Rokka eradakku

ರೊಕ್ಕ ಎರಡಕ್ಕು ದುಃಖ ಕಾಣಕ್ಕ ಪ

ಮಕ್ಕಳ ಮರಿಗಳ ಮಾಡೋದು ರೊಕ್ಕ
ಸಕ್ಕರೆ ತುಪ್ಪವ ಸವಿಸೊದು ರೊಕ್ಕ
ಕಕ್ಕುಲತೆಯನು ಬಿಡಿಸೋದು ರೊಕ್ಕ
ಘಕ್ಕನೆ ಹೋದರೆ ಘಾತಕ ಕಾಣಕ್ಕ ೧

ನೆಂಟರ ಇಷ್ಟರ ಮರೆಸೋದು ರೊಕ್ಕ
ಕಂಟಕಗಳ ಪರಿಹರಿಸೋದು ರೊಕ್ಕ
ಗಂಟು ಕಟ್ಟಲಿಕ್ಕೆ ಕಲಿಸೋದು ರೊಕ್ಕ
ತುಂಟತನಗಳ ಬಲಿಸೋದು ರೊಕ್ಕ ೨

ಇಲ್ಲದ ಗುಣಗಳ ತರಿಸೋದು ರೊಕ್ಕ
ಸಲ್ಲದ ನಾಣ್ಯವ ನಡಿಸೋದು ರೊಕ್ಕ
ಬೆಲ್ಲಕಿಂತಲು ಬಹು ಸವಿಯಾದ ರೊಕ್ಕ
ಇಲ್ಲದಿರಲು ಬಹು ದುಃಖ ಕಾಣಕ್ಕ ೩

ಉಂಟಾದ ಗುಣಗಳ ಮರೆಸೋದು ರೊಕ್ಕ
ಬಂಟರನೆಲ್ಲರ ಬರಿಸೋದು ರೊಕ್ಕ
ಕಂಠಿ ಸರಿಗೆಯನ್ನು ಗಳಿಸೋದು ರೊಕ್ಕ
ಒಂಟೆ ಕುದುರೆ ಆನೆ ತರಿಸೋದು ರೊಕ್ಕ ೪

ವಿದ್ಯದ ಮನುಜರ ಕರೆಸೋದು ರೊಕ್ಕ
ಹೊದ್ದಿದ ಜನರನು ಬಿಡಿಸೋದು ರೊಕ್ಕ
ಮುದ್ದು ಪುರಂದರ ವಿಠಲನ ಮರೆಸುವ
ಬಿದ್ಹೋಗೋ ರೊಕ್ಕವ ಸುಡು ನೀನಕ್ಕ ೫II

Ratuna dorakitalla

ರತುನ ದೊರಕಿತಲ್ಲ ಎನಗೆ ದಿವ್ಯ ರತುನ ದೊರಕಿತಲ್ಲ ಪ

ರತುನ ದೊರಕಿತು ಎನ್ನ ಜನ್ಮ

ಪವಿತ್ರವಾಯಿತು ಈ ದಿನವು ನಾ
ಯತುನಗೈವುತ ಬರುತಿರಲು

ಪ್ರಯತನವಿಲ್ಲದೆ ವಿಜಯರಾಯರೆಂಬ ಅ ಪ

ಪಥದಿ ನಾ ಬರುತಿರಲು ಥಳಥಳವೆಂದು
ಅತಿಕಾಂತಿ ಝಳಪಿಸಲು ಬೆರಗಾಗುತ್ತ
ಅತಿಚೋದ್ಯವ ಕಾಣಲು ಸೇವಿಸುತಿರೆ
ಸತತ ಕರಪಿಡಿದಾದರಿಸಿ ಮನೋ
ರಥವ ಪೂರೈಸುತಲಿ ದಿವ್ಯ

ಸನ್ಮತಿಯ ಪಾಲಿಸಿ ಮೋಕ್ಷ ಸುಪಥವ
ಅತಿಶಯದಿ ತೋರುತಲಿ ಪೊರೆಯುವ ೧

ಜ್ಞಾನವೆಂಬೋ ಪುತ್ಥಳಿ ಕಂಬಿಯಲಿ
ಅಣಿಮುತ್ತಿನ ಭಕ್ತಿಲಿ ಸುಕೃತಮಾತಾ
ನಾನಾ ವಿದ್ಹವಳದಲಿ ಸೇರಿಸುತಿರೆ
ಪ್ರಾಣಪದಕವೆಂಬ ಮಾಲಾನು
ಮಾನವಿಲ್ಲದೆ ಕೊರಳಿಗ್ಹಾಕುತ
ಗಾನದಿಂ ಕುಣಿಯುತಲಿ ಪಾಡುತ ೨

ದೀನ ಜನರುದ್ಧಾರ ಗಯ್ಯುವ
ಶೋಧಿಸಿ ಗ್ರಂಥಗಳ ಸುಳಾದಿಯ
ಮೋದದಿಂದಲಿ ಬಹಳ ಕವಿತೇ ಮಾಡಿ
ಸಾಧುಜನಕೆ ಸುಕಾಲ ಆನಂದವಿತ್ತು
ವಾದಿ ಜನರನು ಗೆದ್ದು ವಾದಿಸಿ
ಮಾಧವ ಜಗನ್ನಾಥವಿಠಲನ
ಪಾದಕಮಲಕೆ ಮಧುಪನಂದದಿ
ಸಾದರದಿ ತೋರಿಸುತ ಮೆರೆಯುವ ೩

Raagi tandirya

ರಾಗಿ ತಂದೀರ್ಯ ಭಿಕ್ಷಕೆ ರಾಗಿ ತಂದೀರ್ಯ IIಪII
ಯೋಗ್ಯರಾಗಿ ಭೋಗ್ಯರಾಗಿ ಭಗ್ಯವಂತರಾಗಿ ನೀವು IIಅಪII

ಅನ್ನದನವ ಮಾಡುವರಾಗಿ ಅನ್ನಛತ್ರವನಿತ್ತವರಾಗಿ
ಅನ್ಯವಾರ್ಥೆಯ ಬಿಟ್ಟವರಾಗಿ ಅನುದಿನ ಭಜನೆಯ ಮಾಡುವರಾಗಿ II೧II

ಮಾತಪಿತೃಗಳ ಸೇವಿಪರಾಗಿ ಪಪ ಕಾರ್ಯಗಳ ಬಿಟ್ಟವರಾಗಿ
ಜಾತಿಯಲ್ಲಿ ಮಿಗಿಲಾದವರಾಗಿ ನೀತಿಮರ್ಗದಲಿ ಖಾತರಾಗಿ II೨II

ಗುರುಕಾರುಣ್ಯವ ಪಡೆದವರಾಗಿ ಗುರುವಿನ ಮರ್ಮದ ತಿಳಿದವರಾಗಿ
ಗುರುವಿನ ಪಾದವ ಸ್ಮರಿಸುವರಾಗಿ ಪರಮಪುಣ್ಯವ ಮಾಡುವರಾಗಿ II೩II

ಶ್ರೀನಿವಾಸನ ಸ್ಮರಿಸುವರಾಗಿ ಪ್ರಾಣ್ರಾಯರ ದಾಸರಾಗಿ
ದಾನಕೆಂದು ಬಲು ಹೆದರಿ ಇಂಥ ದೀನವೃತ್ತಿಯಲಿ ಹೀನರಾಗಿ II೪II

ಪಕ್ಷ ಮಾಸ ವ್ರತ ಮಾಡುವರ್ರಗಿ ಪಕ್ಷಿವಹನಗೆ ಪ್ರಿಯರಾಗಿ
ಕುಕ್ಷಿಯಲಿ ಕಲುಷವಿಲ್ಲದವರಾಗಿ ಭಿಕ್ಷುಕರು ಅತಿ ತುಚ್ಚರಾಗಿ II೫II

ವೇದ ಪುರಾಣವ ತಿಳಿದವರಾಗಿ ಮೇದಿನಿಯೊಳುವರಂಥವರಾಗಿ
ಸಾಧು ಧರ್ಮಗಳ ಚರಿಸುವರಾಗಿ ಓದಿ ಗ್ರಂಥಗಳ ಪಂಡಿತರಾಗಿ II೬II

ಆರು ಮಾರ್ಗವ ಅರಿತವರಾಗಿ ಮೂರು ಮರ್ಗವ ತಿಳಿದವರಾಗಿ
ಭೂರಿತತ್ವ ಬೆರದವರಾಗಿ ಕ್ರೂರರ ಸಂಗವ ಬಿಟ್ಟವರಾಗಿ II೭II

ಕಾಮಕ್ರೋಧವ ಅಳಿದವರಾಗಿ ನೇಮ ನಿತ್ಯವ ಮಾಡುವರಾಗಿ
ಆ ಮಹ ಪದವಿಯ ಸುಖಿಸುವರಾಗಿ ಪ್ರೇಮದಿ ಕುಣಿಕುಣಿದಾಡುವರಾಗಿ II೮II

ಸಿರಿರಮಣನ ಸದಾ ಸ್ಮರಿಸುವರಾಗಿ ಗುರುತಿಗೆ ಬಾಹೋರಂಥವರಾಗಿ
ಕರೆ ಸಂಸಾರವ ನೀಗುವರಾಗಿ ಪುರಂದರ ವಿಠಲನ ಸೇವಿಪರಾಗಿII9II





Neene Ballidanoo hari

ನೀನೆ ಬಲ್ಲಿದನೋ ಹರಿ ನಿನ್ನ ದಾಸರು ಬಲ್ಲಿದರೋ ಪ
ನಾನಾ ತೆರದಿ ನಿಧಾನಿಸಿ ನೋಡಲು
ನೀನೆ ಭಕ್ತರಾಧೀನನಾದ ಮೇಲೆ ಅ ಪ

ಜಲಜ ಭವಾಂಡಕ್ಕೆ ಒಡೆಯ ನೀನೆಸುವೆ
ಬಲು ದೊಡ್ಡವನು ನೀನಹುದೊ
ಆಲಸದೆ ಹಗಲಿರುಳೆನ್ನದೆ ಅನುದಿನ
ಒಲಿದು ಬಲಿಯ ಮನೆಬಾಗಿಲು ಕಾಯ್ದ ಮೇಲೆ ೧

ಖ್ಯಾತಿಯಿಂದಲಿ ಪುರುಹೂತಸಹಿತ ಸುರ
ವ್ರಾತವು ನಿನ್ನನ್ನು ಓಲೈಸಲು
ಭೂತಳದೊಳು ಸಂಪ್ರೀತಿಗೆ ಸಲುಕಿ ನೀ
ಪರ್ಥನ ರಥಕೆ ಸೂತನಾದ ಮೇಲೆ ೨

ಪರಮಪುರುಷ ಪರಬೊಮ್ಮ ನೀನೆನುತಲಿ
ನಿರತ ಶ್ರುತಿಯು ಕೊಂಡಾಡುತಿರೆ
ವರ ಪಂಡವರ ಮನೆಯೊಳಿಗ ಮಾಡ್ಯವರು
ಕರೆಕರೆದಲ್ಲಿಗೆ ಪೋಗಿ ಕಾಯ್ದ ಮೇಲೆ ೩

ಧುರದಲ್ಲಿ ಪಣೆಗೆ ಹೊಡೆಯಲು ಭೀಷ್ಮನು ಸಂ
ಹರಿಪೆನೆನುತ ಚ್ಕ್ರ ಝಳಿಸುತ
ಭರದಿಂದ ಬರಲಿಲ್ಲ ಹರಿನಾಮ ಬಲವಿರೆ
ಪರಕಿಸಿ ನೋಡಿ ಸುಮ್ಮನೆ ತಿರುಗಿದ ಮೇಲೆ ೪

ತರಳ ಕರೆಯಲು ನೀ ತ್ವರಿತದಿ ಕಂಬದಿ ನಂದು
ನರಮೃಗರೂಪದಿಂದವನ ಕಾಯ್ದೆ
ವರಗಳೀವ ಪುರಂದರ ವಿಠಲ ನಿನ್ನ
ಸ್ಮರಿಪರ ಮನದಲ್ಲಿ ಸೆರೆಯ ಸಿಕ್ಕಿದ ಮೇಲೆ ೫

Narayana ninna naamada smarane

ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವೆನ್ನ ಬಾಯಿಗೆ ಬರಲಿ ಬಾ ರಂಗ IIಪII

ಆಡುವಾಗ ನಲಿದಾಡುವಾಗಲಿ ನೋಡುತ ನಿಂದು ಮಾತ್ತಡುವಾಗ
ಕೇಡುತನದಿಂದ ಕೂಡಿ ಭವದೊಳು
ಮಾಡಿದ ಪಾಪವು ಓಡಿ ಹೋಗುವಹಾಗೆ II೧II

ಉರಿ ಬಂದಾಗಲಿ ಛಳಿಬಂದಾಗಲಿ ಗಡಗಡ ನಡಗುತ್ತಿರುವಾಗಲಿ
ಹರಿನಾರಾಯಾಣ ದುರಿತ ನಿವಾರಣ
ಇರುಳು ಹಗಲು ನಿನ್ನ ಸ್ಮರಣೆ ಮಾಡುವಂತೆ II೨II

ಕಷ್ಟವಾಗಿರಲಿ ಉತ್ಕೃಷ್ಟವಾಗಿರಲಿ ಇಷ್ಟಾರ್ಥಗಳೆಲ್ಲ ಕೂಡಿರಲಿ
ಕೃಷ್ಣ ಕೃಷ್ಣಯೆಂಬಭೀಷ್ಟದ ನಾಮದ
ಅಷ್ಟಾಕ್ಷರಿ ಮಂತ್ರ ಜಪಿಸುವ ಹಾಗೆ II೩II

ಕನಸಿನೊಳಾಗಲಿ ಮನಸಿನೊಳಾಗಲಿ ಮನಸು ಕೆಟ್ಟಿರಲಿ ಮುನಿದಿರಲಿ
ಜನಕಜಾಪತಿ ನಿನ್ನ ನಾಮದ ಸ್ಮರಣೆಯು
ಮನಸಿನೊಳಗೆ ಒಮ್ಮೆ ನೆನೆಸುವ ಹಾಗೆ II೪II

ಸಂತತ ನಿನ್ನಯ ಸಾಸಿರನಾಮವೆನ್ನ ಅಂತರಂಗದೊಳಿರುತಿರಲಿ
ಸಂತತ ವರದ ಪುರಂದರ ವಿಠಲ ಎ
ನ್ನಂತಕಾಲದೊಳೊಮ್ಮೆ ನೆನೆಸುವಹಾಗೆ



Naa ninagenu beduvadilla

ನಾ ನಿನಗೇನು ಬೇಡುವುದಿಲ್ಲ ಎನ್ನ
ಹೃದಯಕಮಲದೊಳು ನೆಲೆಸಿರು ಹರಿಯೆ

ಶಿರ ನಿನ್ನ ಚರಣಕ್ಕೆರಗಲಿ ಚಕ್ಷು

ಎರಕದಿಂದಲಿ ನಿನ್ನ ನೋಡಲಿ ಹರಿಯೆ
ಕರಣ ಗೀತಂಗಳ ಕೇಳಲಿ ನಾಸಿಕ
ನಿರ್ಮಾಲ್ಯಾನುದಿನ ಘ್ರಾಣಿಸಲಿ ಹರಿಯೆ II1II


ನಾಲಿಗೆ ನಿನ್ನ ಕೊಂಡಾಡಲಿ ಎನ್ನ
ತೋಳು ಕರಂಗಳ ಮುಗಿಯಲಿ ಹರಿಯೆ
ಕಾಲು ತೀರ್ಥಯಾತ್ರೆಗೆ ಪೋಗಲಿ ಮನ
ಬಲ್ಪಿನಿಂದಲಿ ನಿನ್ನ ಸ್ಮರಿಸಲಿ ಹರಿಯೆII2II


ಚಿತ್ತ ನಿನ್ನೊಳು ಮುಳುಗಾಡಲಿ ನಿನ್ನ
ಭಕ್ತ ಜನರ ಸಂಗ ದೊರಕಲಿ ಹರಿಯೆ
ವೃತ್ತಿ ತತ್ವಯೋಗಾಭ್ಯಾಸಕ್ಕಾಗಲಿ ರಂಗ
ವಿಠಲ ನಿನ್ನ ದಯವಾಗಲಿ ಹರಿಯೆ II3II

Madhwantargata vedavyasa /ಮಧ್ವಾಂತರ್ಗತ ವೇದವ್ಯಾಸ ಕಾಯೊ

ಮಧ್ವಾಂತರ್ಗತ ವೇದವ್ಯಾಸ ಕಾಯೊ
ಶುದ್ಧ ಮೂರುತಿಯೆ ಸರ್ವೇಶ IIಪII

ಶುದ್ಧಮನದಲಿ ನಿನ್ನ ಭಜಿಸುವ ಭಕ್ತರಿಗೆ
ಬುದ್ಧ್ಯಾದಿಗಳ ಕೊಟ್ಟು ಸಲಹೊ ದೇವರ ದೇವ IIಅಪII

ದ್ವಾಪರದಲಿ ಒಬ್ಬ ಮುನಿಪ ತನ್ನ
ಕೋಪದಿಂದಲಿ ಕೊಡಲು ಶಾಪ
ಸ್ಥಾಪಿಸಲು ಜ್ಞಾನ ಲೋಪ
ಅಪಾರ ತತ್ತ್ವಸ್ವರೂಪ
ಶ್ರೀಪತಿಯೇ ಪೊರೆಯೆಂದು ಮೊರೆಯಿಡೆ
ಪಾಪವಿರಹಿತಳಾದ ಯಮುನೆಯ
ದ್ವೀಪದಲಿ ಅಂಬಿಗರ ಹೆಣ್ಣಿನ
ರೂಪಗೊಲಿದವನಲ್ಲಿ ಜನಿಸಿದಿ II೧II

ವೇದವಾದಿಗಳೆಲ್ಲ ಕೆಡಲು ತತ್ತ್ವ-
ವಾದಿ ಜನರು ಬಾಯಿ ಬಿಡಲು
ಮೇದಿನಿ ಸುರರು ಕಂಗೆಡಲು ನಾನಾ
ವೇದವಿಭಾಗ ರಚಿಸಲು
ಮೋದದಿಂದ ತದರ್ಥಬೋಧಕ
ವಾದಶಾಸ್ತ್ರ ಪುರಾಣ ರಚಿಸಿ ವಿ-
ವಾದಗಳ ನಿರ್ವಾದ ಮಾಡಿದ
ಸಾಧುವಂದಿತಬಾದರಾಯಣII ೨II

ಸುಮತಿಗಳಿಗೆ ಬೋಧಿಸಿದೆ ಮಿಕ್ಕ
ಕುಮತಿಗಳನು ಭೇದಿಸಿದೆ
ಕ್ರಿಮಿಯಿಂದ ರಾಜ್ಯವಾಳಿಸಿದ ಜಗ-
ತ್ಸ್ವಾಮಿ ನೀನೆಂದು ತೋರಿಸಿದೆ
ವಿಮಲರೂಪನೆ ಕಮಲನಾಭನೆ
ರಮೆಯ ಅರಸನೆ ರಮ್ಯಚರಿತನೆ
ಮಮತೆಯಲಿ ಕೊಡು ಕಾಮಿತಾರ್ಥವ
ನಮಿಸುವೆನು ಹಯವದನಮೂರುತಿ II೩II

Kangalidyatako /ಕಂಗಳಿದ್ಯಾತಕೊ ಕಾವೇರಿ




ಕಂಗಳಿದ್ಯಾತಕೊ ಕಾವೇರಿ ರಂಗನ ನೋಡದ IIಪII

ಜಗಂಗಳೊಳಗೆ ಮಂಗಳಮೂರುತಿ
ರಂಗನ ಶ್ರೀಪಾದಂಗಳ ನೋಡದ IIಅಪII


ಎಂದಿಗಾದರೊಮ್ಮೆ ಜನರು
ಬಂದು ಭೂಮಿಯಲಿ ನಿಂದು
ಚಂದ್ರ ಪುಷ್ಕರಣಿ ಸ್ನಾನವ ಮಾಡಿ ಆ-
ನಂದದಿಂದಲಿ ರಂಗನ ನೋಡದ II೧II

ಹರಿಪಾದೋದಕ ಸಮ ಕಾವೇರಿ
ವಿರಜಾನದಿ ಸ್ನಾನವ ಮಾಡಿ
ಪರಮ ವೈಕುಂಠ ರಂಗಮಂದಿರ
ಪರವಾಸುದೇವನ ನೋಡದ II೨II

ಹಾರ ಹೀರ ವೈಜಯಂತಿ
ತೋರಮುತ್ತಿನ ಸರವ ಧರಿಸಿ
ತೇರನೇರಿ ಬೀದಿಲಿ ಮೆರೆವ
ರಂಗವಿಠಲನ ನೋಡದ II3II

Audio Link:
http://www.youtube.com/watch?v=PbkHXSa9eQQ&feature=related

Ishtu Dina e vaikuntha / ಇಷ್ಟು ದಿನ ಈ ವೈಕುಂಠ

ಇಷ್ಟು ದಿನ ಈ ವೈಕುಂಠ
ಎಷ್ಟು ದೂರವೊ ಎನ್ನುತಲಿದ್ದೆ
ದೃಷ್ಟಿಯಿಂದಲಿ ನಾನು ಕಂಡೆ
ಸೃಷ್ತಿಗೀಶನೆ ಶ್ರೀರಂಗಶಾಯಿ IIಪII

ಎಂಟು ಏಳನು ಕಳೆದುದರಿಂದೆ
ಬಂಟರೈವರ ತುಳಿದುದರಿಂದೆ
ಕಂಟಕನೊಬ್ಬನ ತರಿದುದರಿಂದೆ
ಬಂಟನಾಗಿ ಬಂದೆನೊ ಶ್ರೀರಂಗಶಾಯಿ II1 II

ವನ ಉಪವನಗಳಿಂದ
ಘನ ಸರೋವರಗಳಿಂದ
ಕನಕ ಗೋಪುರಗಳಿಂದ
ಘನಶೊಭಿತನೆ ಶ್ರೀರಂಗಶಾಯಿ II2II


ವಜ್ರ ವೈಡೂರ್ಯದ ತೊಲೆಗಳ ಕಂಡೆ
ಪ್ರಜ್ವಲಿಪ ಮಹಾದ್ವಾರವ ಕಂಡೆ
ನಿರ್ಜರಾದಿ ಮುನಿಗಳ ಕಂಡೆ
ದುರ್ಜನಾಂತಕನೆ ಶ್ರೀರಂಗಶಾಯಿ II೩II

ರಂಭೆ ಊರ್ವಶಿಯರ ಮೇಳವ ಕಂಡೆ
ತುಂಬುರು ಮುನಿ ನಾರದರನು ಕಂಡೆ
ಅಂಬುಜೋದ್ಭವ ರುದ್ರರ ಕಂಡೆ
ಶಂಬರಾರಿಪಿತನೆ ರಂಗಶಾಯಿ II೪II

ನಾಗಶಯನನ ಮೂರುತಿ ಕಂಡೆ
ಭೋಗಿಭೂಷಣ ಶಿವನನು ಕಂಡೆ
ಭಾಗವತರ ಸಮ್ಮೇಳವ ಕಂಡೆ
ಕಾಗಿನೆಲೆಯಾದಿಕೇಶವ ಶ್ರೀರಂಗಶಾಯಿ II೫II


Daasoham tava Daasoham / ದಾಸೋಹಂ ತವ ದಾಸೋಹಂ

ದಾಸೋಹಂ ತವ ದಾಸೋಹಂ ತವ
ದಾಸೋಹಂ ತವ ದಾಸೋಹಂ IIಪII

ವಾಸುದೇವ ವಿಘತಾಘಸಂಘ ತವ IIಅ ಪII

ಜೀವಾಂತರ್ಗತ ಜೀವ ನಿಯಾಮಕ
ಜೀವ ವಿಲಕ್ಷಣ ಜೀವನದ
ಜೀವಾಧಾರಕ ಜೀವರೂಪಿ ರಾ
ಜೀವ ಭವಜನಕ ಜೀವೇಶ್ವರ ತವ II೧II

ಕಲಾಂತರ್ಗತ ಕಾಲನಿಯಮಕ
ಕಾಲ ತೀತ ತ್ರಿಕಾಲಜ್ಞ
ಕಾಲಪ್ರವರ್ತಕ ಕಾಲನಿವರ್ತಕ
ಕಾಲೋತ್ಪಾದಕ ಕಾಲ ಮೂರ್ಥಿ ತವ II೨II

ಕರ್ಮಕರ್ಮಕೃತ ಕರ್ಮಕೃತಾಗಮ
ಕರ್ಮ ಫಲಪ್ರದ ಕರ್ಮಜಿತ
ಕರ್ಮಬಂಧ ಮಹ ಕರ್ಮವಿಮೋಚಕ
ಕಮ ನಿಗ್ರಹ ಕರ್ಮಸಾಕ್ಷಿ ತವ II೩II

ಧರ್ಮಯೂಪ ಮಹ ಧರ್ಮವಿವರ್ಧನ
ಧರ್ಮವಿದೊತ್ತಮ ಧರ್ಮನಿಧೇ
ಧರ್ಮಸೂಕ್ಷ್ಮ ಮಹ ಧರ್ಮಸಂರಕ್ಷಕ
ಧರ್ಮಸಾಕ್ಷಿ ಯಮಧರ್ಮಪುತ್ರ ತವ II೪II

ಮಂತ್ರಯಂತ್ರ ಮಹ ಮಂತ್ರ ಬೀಜ ಮಹ
ಮಂತ್ರ ರಾಜಗುರು ಮಂತ್ರಧೃತ
ಮಂತ್ರಮೇಯ ಮಹ ಮಂತ್ರನಿಯಾಮಕ
ಮಂತ್ರದೇವ ಜಗನ್ನಾಥ ವಿಠಲ ತವ II೫II

Audio Link:
http://www.kannadaaudio.com/Songs/Devotional/Haridasapadagalu-Vidyabhushana/Daso.ram


Baaro namma manege gopalakrishna / ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ

ಬಾರೊ ನಮ್ಮ ಮನೆಗೆ ಗೋಪಾಲಕೃಷ್ಣ IIಪII

ಗೊಲ್ಲಬಾಲಕರನು ನಿಲ್ಲಿಸಿ ಪೆಗಲೇರಿ
ಗುಲ್ಲುಮಾಡದೆ ಮೊಸರೆಲ್ಲ ಕುಡಿದ ಕೃಷ್ಣ II೧II

ಮೂಜ್ಜಗವನೆಲ್ಲ ಬೊಜ್ಜೆಯೊಳಗೆ ಇಟ್ಟು
ಗೆಜ್ಜೆಯಕಚ್ಚಿ ತಪ್ಹೆಜ್ಜೆಯನಿಕ್ಕುತ II೨II

ಅಂಗನೇಯರ ವ್ರತ ಭಂಗವ ಮಾಡಿದ
ರಂಗವಿಠಲ ಭವಭಂಗವ ಮಾಡುವ II೩II



Audio Link:
http://www.kannadaaudio.com/Songs/Devotional/BS/BaroNammaManege.ram


Aava rogavu yenage deva /ಆವ ರೊಗವು ಎನಗೆ ದೇವ

ಆವ ರೊಗವೊ ಎನಗೆ ದೇವಧನ್ವಂತ್ರಿ IIಪII
ಸವಧಾನದಿ ಎನ್ನ ಕೈಯ ಪಿಡಿದು ನೀ ನೊಡಯ್ಯII ಅ ಪII

ಹರಿ ಮುರ್ತಿಗಳು ಕಾಣಿಸವು ಎನ್ನ ಕಂಗಳಿಗೆ ಕಾಣಿಸರು
ಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆ
ಹರಿ ಮಂತ್ರ ಸ್ತೋತ್ರ ಬಾರದು ಎನ್ನ ನಾಲಿಗೆಗೆ
ಹರಿಪ್ರಸಾದವು ಜಿಹ್ವೆಗೆ ಸವಿಯಾಗದಯ್ಯ II೧II

ಹರಿಪಾದ ಸೆವೆಗೆನ್ನ ಹಸ್ತಗಳು ಚಲಿಸವು
ಗುರುಹಿಯರಂಘ್ರಿಗೆ ಶಿರ ಬಾಗದು
ಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವು
ಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ II೨II

ಅನಾಥಬಂಧು ಗೋಪಾಲವಿಠಲರೆಯಾ
ಎನ್ನ ಭಾಗದ ವೈದ್ಯ ನೀನೆಯಾದೆ
ಅನಾದಿ ಕಾಲದ ಭವರೊಗ ಕಳೆಯಯ್ಯ
ನಾನೆಂದಿಗುಮರೆಯೆ ನೀ ಮಾಡಿದ ಉಪಕಾರ II೩II

Audio Link:http://www.kannadaaudio.com/Songs/Devotional/KalluSakkareKolliro/Aava.ram

Baaro krishnayya ninna Bhaktara /ಬಾರೋ ಕೃಷ್ಣಯ್ಯ ನಿನ್ನ ಭಕ್ತರ

ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗಿಗ IIಪII

ಬಾರೋ ನಿನ್ನ ಮುಖ ತೋರೋ ನಿನ್ನ ಸರಿ ಯಾರೋ ಜಗದಲೇ ಶೀಲನೆ


ಅಂದುಗೆ ಪಾದವು ಕಾಲು೦ದುಗೆ ಕಿರು ಗೆಜ್ಜೆ ಧಿಂ ಧಿಮಿ ಧಿಮಿ ಧಿಮಿ ಧಿಮಿ ಧಿಮಿ ಎನುತ
ಪೋ೦ಗೋಳನೂದೂತ ಬಾರಯ್ಯ II1II


ಕಂಕಣ ಕರದಲ್ಲಿ ಪೂನ್ನು೦ಗುರ ಹೊಳೆಯುತ ಕಿಂಕಿಣಿ ಕಿಣಿ ಕಿಣಿ ಕಿಣಿ ಎನುತ
ಪೋ೦ಗೋಳನೂದೂತ ಬಾರಯ್ಯ ಬಾರೋ ಕೃಷ್ಣಯ್ಯ II೨II


ವಾಸ ಉಡುಪಿಲಿ ನೇಲೆಯಾದಿ ಕೇಶವನೆ ದಾಸ ನಿನ್ನ ಪದ ದಾಸ ನಿನ್ನ ಪದ ದಾಸ
ನಿನ್ನ ಪದ ದಾಸ ಕರೆವೇನು ಬಾರಯ್ಯ II೩ II



Audio link:
http://www.kannadaaudio.com/Songs/Classical/MLV-1/BaaroKrishnayya.ram

krishna ni Begane Baaro /ಕೃಷ್ಣ ನೀ ಬೇಗನೆ ಬಾರೋ

ಕೃಷ್ಣ ನೀ ಬೇಗನೆ ಬಾರೋ IIಪII

ಬೇಗನೆ ಬಾರೋ ಮುಖವನ್ನೇ ತೋರೋ IIಅಪII

ಕಾಲಲಂದುಗಿ ಗೆಜ್ಜೆ ನಿಲದ ಬಾವುಲಿ

ನೀಲವರ್ಣನೆ ನಾಟ್ಯ ವಾಡೂತ್ತ ಬಾರೋ II೨II



ಉಡಿಯಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರ

ಕೊರಳಲ್ಲಿ ಹಾಕಿದ ವೈಜಯಂತಿ ಮಾಲ II೩ II



ಕಾಶಿ ಪೀತಾಂಬರ ಕೈಯಲ್ಲಿ ಕೊಳಲು

ಪೂಶಿದ ಶ್ರೀಗಂಧ ಮೈಯೊಳು ಗಮ ಗಮ II೪II





ತಾಯಿಗೆ ಬಾಯೊಳು ಜಗವನ್ನು ತೂರಿದ

ಜಗದೋದ್ಧಾರಕ ನಮ್ಮ ಉಡುಪಿ ಶ್ರೀ ಕೃಷ್ಣ II೫ II




Audio link:http://www.kannadaaudio.com/Songs/Devotional/KrishnaNeeBeganeBaaro-KJYesudas/Krishna.ram