Monday, August 10, 2009

Ishtu Dina e vaikuntha / ಇಷ್ಟು ದಿನ ಈ ವೈಕುಂಠ

ಇಷ್ಟು ದಿನ ಈ ವೈಕುಂಠ
ಎಷ್ಟು ದೂರವೊ ಎನ್ನುತಲಿದ್ದೆ
ದೃಷ್ಟಿಯಿಂದಲಿ ನಾನು ಕಂಡೆ
ಸೃಷ್ತಿಗೀಶನೆ ಶ್ರೀರಂಗಶಾಯಿ IIಪII

ಎಂಟು ಏಳನು ಕಳೆದುದರಿಂದೆ
ಬಂಟರೈವರ ತುಳಿದುದರಿಂದೆ
ಕಂಟಕನೊಬ್ಬನ ತರಿದುದರಿಂದೆ
ಬಂಟನಾಗಿ ಬಂದೆನೊ ಶ್ರೀರಂಗಶಾಯಿ II1 II

ವನ ಉಪವನಗಳಿಂದ
ಘನ ಸರೋವರಗಳಿಂದ
ಕನಕ ಗೋಪುರಗಳಿಂದ
ಘನಶೊಭಿತನೆ ಶ್ರೀರಂಗಶಾಯಿ II2II


ವಜ್ರ ವೈಡೂರ್ಯದ ತೊಲೆಗಳ ಕಂಡೆ
ಪ್ರಜ್ವಲಿಪ ಮಹಾದ್ವಾರವ ಕಂಡೆ
ನಿರ್ಜರಾದಿ ಮುನಿಗಳ ಕಂಡೆ
ದುರ್ಜನಾಂತಕನೆ ಶ್ರೀರಂಗಶಾಯಿ II೩II

ರಂಭೆ ಊರ್ವಶಿಯರ ಮೇಳವ ಕಂಡೆ
ತುಂಬುರು ಮುನಿ ನಾರದರನು ಕಂಡೆ
ಅಂಬುಜೋದ್ಭವ ರುದ್ರರ ಕಂಡೆ
ಶಂಬರಾರಿಪಿತನೆ ರಂಗಶಾಯಿ II೪II

ನಾಗಶಯನನ ಮೂರುತಿ ಕಂಡೆ
ಭೋಗಿಭೂಷಣ ಶಿವನನು ಕಂಡೆ
ಭಾಗವತರ ಸಮ್ಮೇಳವ ಕಂಡೆ
ಕಾಗಿನೆಲೆಯಾದಿಕೇಶವ ಶ್ರೀರಂಗಶಾಯಿ II೫II


No comments: