Monday, November 9, 2009

Elelu sharadhiya

ಏಳೇಳು ಶರಧಿಯು ಏಕವಾಗಿದೆ ಕಂಡ್ಯ
ಹೇಗೆ ಬಂದೆ ಹೇಳೋ ಕೋತಿ IIಪII
ಏಳು ಶರಧಿಯು ಎನಗೆ ಏಳು ಕಾಲುವೆಯು
ತೂಳಿ ಲಂಘಿಸಿ ಬಂದೆ ಭೂತ IIಅಪII

ಏಳು ಸಮುದ್ರದೊಳಿರುವ ಮಕರಿ ಮತ್ಸ್ಯ
ಹೇಗೆ ಬಿಟ್ಟರು ಹೇಳೊ ಕೋತಿ
ಏಳು ಸಮುದ್ರದ ಮಕರಿ ಮತ್ಸ್ಯದ ಕೂಡೆ
ಮಾತಾಡಿ ಬಂದೆನೊ ಭೂತ II1II


ಲಂಕಾದ್ವಾರದೊಳೊಬ್ಬ ಲಂಕಿಣಿ ಇರುವಳು
ಹೇಗೆ ಬಿಟ್ಟಳು ಹೇಳೊ ಕೋತಿ
ಲಂಕಿಣಿಯನು ಕೊಂದು ಶಂಕೆಯಿಲ್ಲದೆ ನಾನು
ಬಿಂಕದಿಂದಲಿ ಬಂದೆ ಭೂತ II2II

ಕೊಂಬೆಕೊಂಬೆಗೆ ಕೋಟಿಮಂದಿ ರಾಕ್ಷಸರಿರೆ
ಹೇಗೆ ಬಿಟ್ಟರು ಪೇಳೊ ಕೋತಿ
ಕೊಂಬೆ ಕೊಂಬೆಗೆ ಕೋಟಿಮಂದಿ ರಾಕ್ಷಸರನ್ನು
ಕೊಂದ್ಹಾಕಿ ಬಂದೆನೊ ಭೂತ II3II

ಯಾವೂರೊ ಎಲೊ ನೀನು ಯಾವ ಭೂಮಿಯೊ ನಿಂದು
ಯಾಕೆ ಬಂದೆ ಹೇಳೊ ಕೋತಿ
ಯಾವ ವನದೊಳಗೆ ಜಾನಕಿದೇವಿ ಇದ್ದಾಳೊ
ಅವಳ ನೋಡಬಂದೆ ಭೂತ II4II

ದಕ್ಷಿಣಪುರಿ ಲಂಕದಾನವರಿಗಲ್ಲದೆ
ತ್ರ್ಯಕ್ಷಾದ್ಯರಿಗಳವಲ್ಲ ಕೋತಿ
ಪಕ್ಷಿಧ್ವಜ ರಾಮನ ಅಪ್ಪಣೆಯೆನಗಿಲ್ಲ
ಈಕ್ಷಣ ತಪ್ಪಿಸಿಕೊಂಡೆ ಭೂತ II5 II

ದೂತನಗಿಹೆ ಎನ್ನ ಕೈಯೊಳು ಸಿಕ್ಕಿಹೆ
ಕೋಪವಿನ್ನೇತಕ್ಕೊ ಕೋತಿ
ನಾ ತಾಳಿಕೊಂಡಿಹೆನೋ ಈ ಕ್ಷಣದಿ ಲಂಕೆ
ನಿರ್ಧೂಮವನು ಮಾಳ್ಪೆ ಭೂತ II6II


ನಿಮ್ಮಂಥ ದಾಸರು ನಿಮ್ಮರಸನ ಬಳಿ
ಎಷ್ಟು ಮಂದಿದ್ದಾರೆ ಕೋತಿ
ನನ್ನಂಥ ದಾಸರು ನಿನ್ನಂಥ ಹೇಡಿಗಳು
ಕೋಟ್ಯಾನುಕೋಟಿಯೊ ಭೂತ II7 II

ಎಲ್ಲಿಂದ ನೀ ಬಂದೆ ಏತಕ್ಕೆಲ್ಲರ ಕೊಂದೆ
ಯಾವರಸನ ಬಂಟ ಕೋತಿ
ಚೆಲ್ವಯೋದ್ಯಾಪುರದರಸು ಜಾನಕಿಪತಿ
ರಾಮಚಂದ್ರನ ಬಂಟ ಭೂತ II8 II

ಸಿರಿರಾಮಚಂದ್ರನು ನಿನ್ನರಸನಾದರೆ
ಆತ ಮುನ್ನಾರ‍್ಹೇಳೋ ಕೋತಿ
ಹಿರಣ್ಯಕನನು ಸೀಳಿ ಪ್ರಹ್ಲಾದಗೊಲಿದ ಶ್ರೀ
ಪುರಂದರವಿಠಲನೊ ಭೂತ II9II