Sunday, August 23, 2009

Aparaadhi naanalla /ಅಪರಾಧಿ ನಾನಲ್ಲ ಅಪರಾಧ

ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ

ನೀನೇ ಆಡಿಸದಿರಲು ಜಡ ಒನಿಕೆಯ ಬೊಂಬೆ
ಏನುಮಾಡಲು ಬಲ್ಲದು ತಾನೆಬೇರೆ
ನೀನಿಟ್ಟ ಸೂತ್ರದಿಂ ಚಲಿಪವು ಕೈಕಾಲುಗಳು
ನೀನೇ ಮುಗ್ಗಿಸಲು ಮುಗ್ಗುವ ದೇಹದವನು II೧II

ಒಂದೆಂಟು ಬಾಗಿಲ ಪಟ್ಟಣಕ್ಕೆ ತನ್ನ
ದೆಂದು ಇಪ್ಪತ್ತಾರು ಮನೆಯಾಳ್ಗಳ
ತಂದು ಕಾವಲ ನಿಲಿಸಿ ಎನ್ನ ನೀ ಒಳಗಿಟ್ಟು
ಮುಂದೆ ಭವದಲಿ ಬವಣಿಪುದನ್ಯಾಯ II೨ II

ಯಂತ್ರವಾಹಕ ನೀನೇ ಒಳಗಿದ್ದು ಎನ್ನ ಸ್ವ
ತಂತ್ರನೆಂದೆನಿಸಿ ಕೊಲಿಸುವರೆ ಹೇಳೊ
ಕಂತುಪಿತ ಲಕ್ಷ್ಮೀಶ ಎಂತಾಡದಂತಹುದಾ
ನಂತಮೂರುತಿ ನಮ್ಮ ಪುರಂದರವಿಠಲII ೩II

Aaru Balidarenu aaru baadukidarenu.

ಆರು ಬಾಳಿದರೇನು ಆರು ಬದುಕಿದರೇನು
ನಾರಯಣನ ಸ್ಮರಣೆ ನಮಗಿಲ್ಲದನಕ IIಪ II

ಉಣ್ಣಬರದವರಲ್ಲಿ ಊರೂಟವಾದರೆ ಏನು
ಹಣ್ಣು ಬಿಡದ ಮರಗಳು ಹಾಳಾದರೇನು
ಕಣ್ಣಿಲ್ಲದವಗಿನ್ನು ಕನ್ನಡಿಯಿದ್ದು ಫಲವೇನು
ಪುಣ್ಯವಿಲ್ಲದವನ ಪ್ರೌಢಿಮೆ ಮೆರೆದರೇನು II೧II

ಅಕ್ಕರಿಲ್ಲದವರಿಗೆ ಮಕ್ಕಳಿದ್ದು ಫಲವೇನು
ಹೊಕ್ಕು ನಡೆಯದ ನಂಟತನದೊಳೇನು
ರೊಕ್ಕವಿಲ್ಲದವಗೆ ಬಂಧುಗಳು ಇದ್ದರೇನು
ಮರ್ಕಟನ ಕೈಯೊಳಗೆ ಮಾಣಿಕ್ಯವಿದ್ದರೇನುII ೨II

ಅಲ್ಪದೊರೆಗಳ ಜೀತ ಎಷ್ತು ಮಾಡಿದರೇನು
ಬಲ್ಪಂಥವಿಲ್ಲದವನ ಬಾಳ್ವೆಯೇನು
ಕಲ್ಪಕಲ್ಪಿತ ಕಾಗಿನೆಲೆಯಾದಿ ಕೇಶವನ
ಸ್ವಲ್ಪವೂ ನೆನೆಯದ ನರನಿದ್ದರೇನು II೩II