ರಾಮ ಮಂತ್ರವ ಜಪಿಸೊ ಹೇ ಮನುಜ IIಪII
ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ ( ಜಪಿಸಿ ಕೆಡಲು ಬೇಡ)
ಸೋಮಶೇಖರ ತನ್ನ ಭಾಮಿನಿಗೊರೆದಿಹ (ಭಾಮೆಗೆ ಪೇಳಿದ)ಮಂತ್ರಅ ಪII
ಕುಲಹೀನನಾದರು ಕೂಗಿಜಪಿಸುವ ಮಂತ್ರ
ಜಲಜ ಪ್ರಾಣಿ ನಿತ್ಯ ಜಪಿಪ ಮಂತ್ರ
ಹಲವು ಪಾಪಂಗಳ ಹದೆಗೆಡಿಸುವ ಮಂತ್ರ
ಸುಲಭದಿಂದಲಿ ಸ್ವರ್ಗ (ಮೋಕ್ಷ) ಸೂರೆಗೊಂಬುವ ಮಂತ್ರ II೧II
ಮರುತಾತ್ಮಜ ನಿತ್ಯ ಸ್ಮರಣೆ ಮಾಡುವ ಮಂತ್ರ
ಸರ್ವ ಋಷಿಗಳಲ್ಲಿ ಸೇರಿದ ಮಂತ್ರ
ದುರಿತಕಾನನಕಿದು ದಾವನಲ ಮಂತ್ರ
ಪೊರೆದು ವಿಭೀಷಣಗೆ ಪಟ್ಟಗಟ್ಟಿದ ಮಂತ್ರ II೨II
ಜ್ಞಾನನಿಧಿ ನಮ್ಮ ಆನಂದತಿರ್ಥರು
ಸಾನುರಾಗದಿ ನಿತ್ಯ ಸೇವಿಪ ಮಂತ್ರ
ಭಾನುಕುಲಾಂಬುಧಿ ಸೋಮನೆನಿಪ ನಮ್ಮ
ದೀನರಕ್ಷಕ ಪುರಂದರ ವಿಠಲನ ಮಂತ್ರ II೩II
No comments:
Post a Comment