ಸತ್ಯವಂತರ ಸಂಗವಿರಲು ತೀರ್ಥವೇತಕೆ
ನಿತ್ಯ ಜ್ಞಾನಿಯಾದ ಮೇಲೆ ಚಿಂತೆ ಯಾತಕೆ IIಪII
ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ
ಮಾನ ಹೀನನಾಗಿ ಬಾಳ್ವ ಮನುಜನೇತಕೆ
ಜ್ಞಾನವಿಲ್ಲದೇ ನೂರು ಕಾಲ ಬದುಕಲೇತಕೆ
ಮಾನಿನಿಯ ತೊರೆದವಗೆ ಭೋಗವೇತಕೆ II೧II
ಮಾತು ಕೇಳದೆ ಮಲತು ನಡೆವ ಮಕ್ಕಳೇತಕೆ
ಪ್ರೀತಿ ಇಲ್ಲದೆ ಎಡೆಯನಿಕ್ಕಿದ ಅನ್ನವೇತಕೆ
ನೀತಿಯರಿತು ನಡೆಯದಿರುವ ಬಂಟನೇತಕೆ
ಸೋತು ಹೆಣ್ಣಿಗೆ ಹೆದರಿ ನಡೆವ ಪುರುಶನೇತಕೆ II೨ II
ಸಂಜ್ಞೆಯರಿತು ನಡೆಯದಿರುವ ಸತಿ ಇದ್ದೇತಕೆ
ಮುನ್ನ ಕೊಟ್ಟು ಪಡೆಯದನ್ನು ಬಯಸಲೇತಕೆ
ಮನ್ನಣೆಯ ನಡೆಸದಿರುವ ದೊರೆಯು ಏತಕೆ
ಚೆನ್ನ ಆದಿ ಕೇಶವನಲ್ಲದ ದೈವವೇತಕೆ II3 II
Audio Link:http://www.musicindiaonline.com/p/x/HsK9CKz2SS.As1NMvHdW/