Friday, October 16, 2009

Hariya neneyada

ಹರಿಯ ನೆನೆಯದ ನರಜನ್ಮವೇಕೆ ನರ
ಹರಿಯ ಕೊಂಡಾಡದ ನಾಲಿಗೆಯೇಕೆ ಪ

ವೇದವನೋದದ ವಿಪ್ರ ತಾನೇಕೆ
ಕಾದಲರಿಯದ ಕ್ಷತ್ರಿಯನೇಕೆ
ಕ್ರೋಧವ ಬಿಡದ ಸಂನ್ಯಾಸಿ ತಾನೇಕೆ
ಆದರವಿಲ್ಲದ ಅಮೃತಾನ್ನವೇಕೆ ೧

ಸತ್ಯಶೌಚವಿಲ್ಲದಾಚಾರವೇಕೆ
ನಿತ್ಯ ನೇಮವಿಲ್ಲದ ಜಪತಪವೇಕೆ
ಭಕ್ತಿಲಿ ಮಾಡದ ಹರಿಪೂಜೆಯೇಕೆ
ಉತ್ತಮರಿಲ್ಲದ ಸಭೆಯು ತಾನೇಕೆ ೨


ಮಾತಪಿತರ ಪೊರೆಯದ ಮಕ್ಕಳೇಕೆ
ಮಾತುಕೇಳದ ಸೊಸೆಗೊಡವೆ ತಾನೇಕೆ
ನೀತಿ ನೇರಿಲ್ಲದ ಕೂಟ ತಾನೇಕೆ ಅ
ನಾಥನಾದ ಮೇಲೆ ಕೋಪವದೇಕೆ ೩

ಅಳಿದು ಅಳಿದು ಹೋಗುವ ಮಕ್ಕಳೇಕೆ
ತಿಳಿದು ಬುದ್ಧಿಯ ಹೇಳದ ಗುರುವೇಕೆ
ನಳಿನನಾಭ ಶ್ರೀ ಪುರಂದರವಿಠಲನ
ಚೆಲುವ ಮೂರುತಿಯ ನೋಡದ ಕಂಗಳೇಕೆ ೪

No comments: