ಏಕೆ ಮಲಗಿಹೆ ಹರಿಯೆ ಏಸು ಆಯಾಸ
ಜೋಕೆ ಮಾಡುವ ಬಿರುದು ಸಾಕಾಯಿತೇನೊ IIಪII
ತಮನೊಡನೆ ಹೋರಾಡಿ ತಪಿಸಿ ಮೈ ಬೆವರಿತೊ
ಅಮೃತಮಥನದಿ ಗಿರಿಯು ಅತಿ ಭಾರವಾಯ್ತೊ
ರಮಣಿಯನು ತರುವಾಗ ರಣರಂಗ ಬಹಳಯ್ತೊ
ಅಮರರಿಪುವನು ಸೀಳೆ ಆಯಾಸವಾಯ್ತೊ II೧II
ಅಕಾಶ ಭೇದಿಸಲು ಆ ಕಾಲು ಉಳುಕಿತೊ
ಕಾಕುನೃಪರನು ಸೀಳಿ ಕರ ಸೋತಿತೊ
ಭೂದೇವಿಯನರಸಿ ಬಳಲಿಕೆಯು ಬಹಳಾಯ್ತೊ
ಲೋಕಭಾರವ ಇಳುಹಿ ಸಾಕುಸಾಕಾಯ್ತೊ II೨ II
ಚಪಲೆಯರ ಮೋಹಿಸಲು ಉಪಟವು ಬಹಳಯ್ತೊ
ಅಪವಿತ್ರವನಡಗಿಸಲು ಅಧಿಕ ಶ್ರಮವಾಯ್ತೊ
ಕೃಪೆಮಾಡಿ ನೋಡೈಯ್ಯ ಕಣ್ಣುತೆರೆದು ಎನ್ನಕಡೆ
ಕಪಟನಾಟಕ ಶ್ರೀ ಗೋಪಾಲವಿಠಲ II೩II
No comments:
Post a Comment