ನೀನೆ ಬಲ್ಲಿದನೋ ಹರಿ ನಿನ್ನ ದಾಸರು ಬಲ್ಲಿದರೋ ಪ
ನಾನಾ ತೆರದಿ ನಿಧಾನಿಸಿ ನೋಡಲು
ನೀನೆ ಭಕ್ತರಾಧೀನನಾದ ಮೇಲೆ ಅ ಪ
ಜಲಜ ಭವಾಂಡಕ್ಕೆ ಒಡೆಯ ನೀನೆಸುವೆ
ಬಲು ದೊಡ್ಡವನು ನೀನಹುದೊ
ಆಲಸದೆ ಹಗಲಿರುಳೆನ್ನದೆ ಅನುದಿನ
ಒಲಿದು ಬಲಿಯ ಮನೆಬಾಗಿಲು ಕಾಯ್ದ ಮೇಲೆ ೧
ಖ್ಯಾತಿಯಿಂದಲಿ ಪುರುಹೂತಸಹಿತ ಸುರ
ವ್ರಾತವು ನಿನ್ನನ್ನು ಓಲೈಸಲು
ಭೂತಳದೊಳು ಸಂಪ್ರೀತಿಗೆ ಸಲುಕಿ ನೀ
ಪರ್ಥನ ರಥಕೆ ಸೂತನಾದ ಮೇಲೆ ೨
ಪರಮಪುರುಷ ಪರಬೊಮ್ಮ ನೀನೆನುತಲಿ
ನಿರತ ಶ್ರುತಿಯು ಕೊಂಡಾಡುತಿರೆ
ವರ ಪಂಡವರ ಮನೆಯೊಳಿಗ ಮಾಡ್ಯವರು
ಕರೆಕರೆದಲ್ಲಿಗೆ ಪೋಗಿ ಕಾಯ್ದ ಮೇಲೆ ೩
ಧುರದಲ್ಲಿ ಪಣೆಗೆ ಹೊಡೆಯಲು ಭೀಷ್ಮನು ಸಂ
ಹರಿಪೆನೆನುತ ಚ್ಕ್ರ ಝಳಿಸುತ
ಭರದಿಂದ ಬರಲಿಲ್ಲ ಹರಿನಾಮ ಬಲವಿರೆ
ಪರಕಿಸಿ ನೋಡಿ ಸುಮ್ಮನೆ ತಿರುಗಿದ ಮೇಲೆ ೪
ತರಳ ಕರೆಯಲು ನೀ ತ್ವರಿತದಿ ಕಂಬದಿ ನಂದು
ನರಮೃಗರೂಪದಿಂದವನ ಕಾಯ್ದೆ
ವರಗಳೀವ ಪುರಂದರ ವಿಠಲ ನಿನ್ನ
ಸ್ಮರಿಪರ ಮನದಲ್ಲಿ ಸೆರೆಯ ಸಿಕ್ಕಿದ ಮೇಲೆ ೫
No comments:
Post a Comment