Monday, August 10, 2009

ರಾಮ ನಾಮವ ನೆನೆ ಮನವೆ ಪ
ರಾಮ ಎಂದವನೆ ಧನ್ಯನೆಂದು ಶೃತಿತತಿಗಳು ಪೊಗಳುತಿರೆ ಅ ಪ

ತರುಣತನದಿ ದಿನದಾಟಿತು ಸುಮ್ಮನೆ
ಶರೀರದೊಳು ಸ್ವರವಾಡುತಲೆ
ತರುಣಿ ಸುತರು ಸಂಸಾರವೆಂಬ
ಶರಧಿಯೊಳಗೆ ಮುಳುಗಿರದೆ ಮನವೆ ೧

ಬಗೆ ಬಗೆ ಜನ್ಮದಿ ಜನಿಸಿದೆ ನಾಳೆಗೆ
ಸಿಗುವುದೆ ನಿಜದಿಂ ಈ ಸಮಯ
ಮುಗುಧನಾಗಿ ಮತ್ತೆ ಜನಿಸಿ ಬರುವುದು
ಸೊಗಸು ಕಾಣುವುದೆ ಛೀ ಮನವೆ ೨

ಚಿಂತೆಯನೆಲ್ಲ ಒತ್ತಟ್ಟಿಗೆ ಇಟ್ಟು
ಅಂತರಂಗದಲಿ ಧ್ಯಾನಿಸುತ
ಕಂತುಪಿತ ಕನಕಾದಿಕೇಶವನ
ಎಂತಾದರೂ ನೀ ಬಿಡಬೇಡ ಮನವೆ 3II

Rokka eradakku

ರೊಕ್ಕ ಎರಡಕ್ಕು ದುಃಖ ಕಾಣಕ್ಕ ಪ

ಮಕ್ಕಳ ಮರಿಗಳ ಮಾಡೋದು ರೊಕ್ಕ
ಸಕ್ಕರೆ ತುಪ್ಪವ ಸವಿಸೊದು ರೊಕ್ಕ
ಕಕ್ಕುಲತೆಯನು ಬಿಡಿಸೋದು ರೊಕ್ಕ
ಘಕ್ಕನೆ ಹೋದರೆ ಘಾತಕ ಕಾಣಕ್ಕ ೧

ನೆಂಟರ ಇಷ್ಟರ ಮರೆಸೋದು ರೊಕ್ಕ
ಕಂಟಕಗಳ ಪರಿಹರಿಸೋದು ರೊಕ್ಕ
ಗಂಟು ಕಟ್ಟಲಿಕ್ಕೆ ಕಲಿಸೋದು ರೊಕ್ಕ
ತುಂಟತನಗಳ ಬಲಿಸೋದು ರೊಕ್ಕ ೨

ಇಲ್ಲದ ಗುಣಗಳ ತರಿಸೋದು ರೊಕ್ಕ
ಸಲ್ಲದ ನಾಣ್ಯವ ನಡಿಸೋದು ರೊಕ್ಕ
ಬೆಲ್ಲಕಿಂತಲು ಬಹು ಸವಿಯಾದ ರೊಕ್ಕ
ಇಲ್ಲದಿರಲು ಬಹು ದುಃಖ ಕಾಣಕ್ಕ ೩

ಉಂಟಾದ ಗುಣಗಳ ಮರೆಸೋದು ರೊಕ್ಕ
ಬಂಟರನೆಲ್ಲರ ಬರಿಸೋದು ರೊಕ್ಕ
ಕಂಠಿ ಸರಿಗೆಯನ್ನು ಗಳಿಸೋದು ರೊಕ್ಕ
ಒಂಟೆ ಕುದುರೆ ಆನೆ ತರಿಸೋದು ರೊಕ್ಕ ೪

ವಿದ್ಯದ ಮನುಜರ ಕರೆಸೋದು ರೊಕ್ಕ
ಹೊದ್ದಿದ ಜನರನು ಬಿಡಿಸೋದು ರೊಕ್ಕ
ಮುದ್ದು ಪುರಂದರ ವಿಠಲನ ಮರೆಸುವ
ಬಿದ್ಹೋಗೋ ರೊಕ್ಕವ ಸುಡು ನೀನಕ್ಕ ೫II

Ratuna dorakitalla

ರತುನ ದೊರಕಿತಲ್ಲ ಎನಗೆ ದಿವ್ಯ ರತುನ ದೊರಕಿತಲ್ಲ ಪ

ರತುನ ದೊರಕಿತು ಎನ್ನ ಜನ್ಮ

ಪವಿತ್ರವಾಯಿತು ಈ ದಿನವು ನಾ
ಯತುನಗೈವುತ ಬರುತಿರಲು

ಪ್ರಯತನವಿಲ್ಲದೆ ವಿಜಯರಾಯರೆಂಬ ಅ ಪ

ಪಥದಿ ನಾ ಬರುತಿರಲು ಥಳಥಳವೆಂದು
ಅತಿಕಾಂತಿ ಝಳಪಿಸಲು ಬೆರಗಾಗುತ್ತ
ಅತಿಚೋದ್ಯವ ಕಾಣಲು ಸೇವಿಸುತಿರೆ
ಸತತ ಕರಪಿಡಿದಾದರಿಸಿ ಮನೋ
ರಥವ ಪೂರೈಸುತಲಿ ದಿವ್ಯ

ಸನ್ಮತಿಯ ಪಾಲಿಸಿ ಮೋಕ್ಷ ಸುಪಥವ
ಅತಿಶಯದಿ ತೋರುತಲಿ ಪೊರೆಯುವ ೧

ಜ್ಞಾನವೆಂಬೋ ಪುತ್ಥಳಿ ಕಂಬಿಯಲಿ
ಅಣಿಮುತ್ತಿನ ಭಕ್ತಿಲಿ ಸುಕೃತಮಾತಾ
ನಾನಾ ವಿದ್ಹವಳದಲಿ ಸೇರಿಸುತಿರೆ
ಪ್ರಾಣಪದಕವೆಂಬ ಮಾಲಾನು
ಮಾನವಿಲ್ಲದೆ ಕೊರಳಿಗ್ಹಾಕುತ
ಗಾನದಿಂ ಕುಣಿಯುತಲಿ ಪಾಡುತ ೨

ದೀನ ಜನರುದ್ಧಾರ ಗಯ್ಯುವ
ಶೋಧಿಸಿ ಗ್ರಂಥಗಳ ಸುಳಾದಿಯ
ಮೋದದಿಂದಲಿ ಬಹಳ ಕವಿತೇ ಮಾಡಿ
ಸಾಧುಜನಕೆ ಸುಕಾಲ ಆನಂದವಿತ್ತು
ವಾದಿ ಜನರನು ಗೆದ್ದು ವಾದಿಸಿ
ಮಾಧವ ಜಗನ್ನಾಥವಿಠಲನ
ಪಾದಕಮಲಕೆ ಮಧುಪನಂದದಿ
ಸಾದರದಿ ತೋರಿಸುತ ಮೆರೆಯುವ ೩

Raagi tandirya

ರಾಗಿ ತಂದೀರ್ಯ ಭಿಕ್ಷಕೆ ರಾಗಿ ತಂದೀರ್ಯ IIಪII
ಯೋಗ್ಯರಾಗಿ ಭೋಗ್ಯರಾಗಿ ಭಗ್ಯವಂತರಾಗಿ ನೀವು IIಅಪII

ಅನ್ನದನವ ಮಾಡುವರಾಗಿ ಅನ್ನಛತ್ರವನಿತ್ತವರಾಗಿ
ಅನ್ಯವಾರ್ಥೆಯ ಬಿಟ್ಟವರಾಗಿ ಅನುದಿನ ಭಜನೆಯ ಮಾಡುವರಾಗಿ II೧II

ಮಾತಪಿತೃಗಳ ಸೇವಿಪರಾಗಿ ಪಪ ಕಾರ್ಯಗಳ ಬಿಟ್ಟವರಾಗಿ
ಜಾತಿಯಲ್ಲಿ ಮಿಗಿಲಾದವರಾಗಿ ನೀತಿಮರ್ಗದಲಿ ಖಾತರಾಗಿ II೨II

ಗುರುಕಾರುಣ್ಯವ ಪಡೆದವರಾಗಿ ಗುರುವಿನ ಮರ್ಮದ ತಿಳಿದವರಾಗಿ
ಗುರುವಿನ ಪಾದವ ಸ್ಮರಿಸುವರಾಗಿ ಪರಮಪುಣ್ಯವ ಮಾಡುವರಾಗಿ II೩II

ಶ್ರೀನಿವಾಸನ ಸ್ಮರಿಸುವರಾಗಿ ಪ್ರಾಣ್ರಾಯರ ದಾಸರಾಗಿ
ದಾನಕೆಂದು ಬಲು ಹೆದರಿ ಇಂಥ ದೀನವೃತ್ತಿಯಲಿ ಹೀನರಾಗಿ II೪II

ಪಕ್ಷ ಮಾಸ ವ್ರತ ಮಾಡುವರ್ರಗಿ ಪಕ್ಷಿವಹನಗೆ ಪ್ರಿಯರಾಗಿ
ಕುಕ್ಷಿಯಲಿ ಕಲುಷವಿಲ್ಲದವರಾಗಿ ಭಿಕ್ಷುಕರು ಅತಿ ತುಚ್ಚರಾಗಿ II೫II

ವೇದ ಪುರಾಣವ ತಿಳಿದವರಾಗಿ ಮೇದಿನಿಯೊಳುವರಂಥವರಾಗಿ
ಸಾಧು ಧರ್ಮಗಳ ಚರಿಸುವರಾಗಿ ಓದಿ ಗ್ರಂಥಗಳ ಪಂಡಿತರಾಗಿ II೬II

ಆರು ಮಾರ್ಗವ ಅರಿತವರಾಗಿ ಮೂರು ಮರ್ಗವ ತಿಳಿದವರಾಗಿ
ಭೂರಿತತ್ವ ಬೆರದವರಾಗಿ ಕ್ರೂರರ ಸಂಗವ ಬಿಟ್ಟವರಾಗಿ II೭II

ಕಾಮಕ್ರೋಧವ ಅಳಿದವರಾಗಿ ನೇಮ ನಿತ್ಯವ ಮಾಡುವರಾಗಿ
ಆ ಮಹ ಪದವಿಯ ಸುಖಿಸುವರಾಗಿ ಪ್ರೇಮದಿ ಕುಣಿಕುಣಿದಾಡುವರಾಗಿ II೮II

ಸಿರಿರಮಣನ ಸದಾ ಸ್ಮರಿಸುವರಾಗಿ ಗುರುತಿಗೆ ಬಾಹೋರಂಥವರಾಗಿ
ಕರೆ ಸಂಸಾರವ ನೀಗುವರಾಗಿ ಪುರಂದರ ವಿಠಲನ ಸೇವಿಪರಾಗಿII9II





Neene Ballidanoo hari

ನೀನೆ ಬಲ್ಲಿದನೋ ಹರಿ ನಿನ್ನ ದಾಸರು ಬಲ್ಲಿದರೋ ಪ
ನಾನಾ ತೆರದಿ ನಿಧಾನಿಸಿ ನೋಡಲು
ನೀನೆ ಭಕ್ತರಾಧೀನನಾದ ಮೇಲೆ ಅ ಪ

ಜಲಜ ಭವಾಂಡಕ್ಕೆ ಒಡೆಯ ನೀನೆಸುವೆ
ಬಲು ದೊಡ್ಡವನು ನೀನಹುದೊ
ಆಲಸದೆ ಹಗಲಿರುಳೆನ್ನದೆ ಅನುದಿನ
ಒಲಿದು ಬಲಿಯ ಮನೆಬಾಗಿಲು ಕಾಯ್ದ ಮೇಲೆ ೧

ಖ್ಯಾತಿಯಿಂದಲಿ ಪುರುಹೂತಸಹಿತ ಸುರ
ವ್ರಾತವು ನಿನ್ನನ್ನು ಓಲೈಸಲು
ಭೂತಳದೊಳು ಸಂಪ್ರೀತಿಗೆ ಸಲುಕಿ ನೀ
ಪರ್ಥನ ರಥಕೆ ಸೂತನಾದ ಮೇಲೆ ೨

ಪರಮಪುರುಷ ಪರಬೊಮ್ಮ ನೀನೆನುತಲಿ
ನಿರತ ಶ್ರುತಿಯು ಕೊಂಡಾಡುತಿರೆ
ವರ ಪಂಡವರ ಮನೆಯೊಳಿಗ ಮಾಡ್ಯವರು
ಕರೆಕರೆದಲ್ಲಿಗೆ ಪೋಗಿ ಕಾಯ್ದ ಮೇಲೆ ೩

ಧುರದಲ್ಲಿ ಪಣೆಗೆ ಹೊಡೆಯಲು ಭೀಷ್ಮನು ಸಂ
ಹರಿಪೆನೆನುತ ಚ್ಕ್ರ ಝಳಿಸುತ
ಭರದಿಂದ ಬರಲಿಲ್ಲ ಹರಿನಾಮ ಬಲವಿರೆ
ಪರಕಿಸಿ ನೋಡಿ ಸುಮ್ಮನೆ ತಿರುಗಿದ ಮೇಲೆ ೪

ತರಳ ಕರೆಯಲು ನೀ ತ್ವರಿತದಿ ಕಂಬದಿ ನಂದು
ನರಮೃಗರೂಪದಿಂದವನ ಕಾಯ್ದೆ
ವರಗಳೀವ ಪುರಂದರ ವಿಠಲ ನಿನ್ನ
ಸ್ಮರಿಪರ ಮನದಲ್ಲಿ ಸೆರೆಯ ಸಿಕ್ಕಿದ ಮೇಲೆ ೫

Narayana ninna naamada smarane

ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವೆನ್ನ ಬಾಯಿಗೆ ಬರಲಿ ಬಾ ರಂಗ IIಪII

ಆಡುವಾಗ ನಲಿದಾಡುವಾಗಲಿ ನೋಡುತ ನಿಂದು ಮಾತ್ತಡುವಾಗ
ಕೇಡುತನದಿಂದ ಕೂಡಿ ಭವದೊಳು
ಮಾಡಿದ ಪಾಪವು ಓಡಿ ಹೋಗುವಹಾಗೆ II೧II

ಉರಿ ಬಂದಾಗಲಿ ಛಳಿಬಂದಾಗಲಿ ಗಡಗಡ ನಡಗುತ್ತಿರುವಾಗಲಿ
ಹರಿನಾರಾಯಾಣ ದುರಿತ ನಿವಾರಣ
ಇರುಳು ಹಗಲು ನಿನ್ನ ಸ್ಮರಣೆ ಮಾಡುವಂತೆ II೨II

ಕಷ್ಟವಾಗಿರಲಿ ಉತ್ಕೃಷ್ಟವಾಗಿರಲಿ ಇಷ್ಟಾರ್ಥಗಳೆಲ್ಲ ಕೂಡಿರಲಿ
ಕೃಷ್ಣ ಕೃಷ್ಣಯೆಂಬಭೀಷ್ಟದ ನಾಮದ
ಅಷ್ಟಾಕ್ಷರಿ ಮಂತ್ರ ಜಪಿಸುವ ಹಾಗೆ II೩II

ಕನಸಿನೊಳಾಗಲಿ ಮನಸಿನೊಳಾಗಲಿ ಮನಸು ಕೆಟ್ಟಿರಲಿ ಮುನಿದಿರಲಿ
ಜನಕಜಾಪತಿ ನಿನ್ನ ನಾಮದ ಸ್ಮರಣೆಯು
ಮನಸಿನೊಳಗೆ ಒಮ್ಮೆ ನೆನೆಸುವ ಹಾಗೆ II೪II

ಸಂತತ ನಿನ್ನಯ ಸಾಸಿರನಾಮವೆನ್ನ ಅಂತರಂಗದೊಳಿರುತಿರಲಿ
ಸಂತತ ವರದ ಪುರಂದರ ವಿಠಲ ಎ
ನ್ನಂತಕಾಲದೊಳೊಮ್ಮೆ ನೆನೆಸುವಹಾಗೆ



Naa ninagenu beduvadilla

ನಾ ನಿನಗೇನು ಬೇಡುವುದಿಲ್ಲ ಎನ್ನ
ಹೃದಯಕಮಲದೊಳು ನೆಲೆಸಿರು ಹರಿಯೆ

ಶಿರ ನಿನ್ನ ಚರಣಕ್ಕೆರಗಲಿ ಚಕ್ಷು

ಎರಕದಿಂದಲಿ ನಿನ್ನ ನೋಡಲಿ ಹರಿಯೆ
ಕರಣ ಗೀತಂಗಳ ಕೇಳಲಿ ನಾಸಿಕ
ನಿರ್ಮಾಲ್ಯಾನುದಿನ ಘ್ರಾಣಿಸಲಿ ಹರಿಯೆ II1II


ನಾಲಿಗೆ ನಿನ್ನ ಕೊಂಡಾಡಲಿ ಎನ್ನ
ತೋಳು ಕರಂಗಳ ಮುಗಿಯಲಿ ಹರಿಯೆ
ಕಾಲು ತೀರ್ಥಯಾತ್ರೆಗೆ ಪೋಗಲಿ ಮನ
ಬಲ್ಪಿನಿಂದಲಿ ನಿನ್ನ ಸ್ಮರಿಸಲಿ ಹರಿಯೆII2II


ಚಿತ್ತ ನಿನ್ನೊಳು ಮುಳುಗಾಡಲಿ ನಿನ್ನ
ಭಕ್ತ ಜನರ ಸಂಗ ದೊರಕಲಿ ಹರಿಯೆ
ವೃತ್ತಿ ತತ್ವಯೋಗಾಭ್ಯಾಸಕ್ಕಾಗಲಿ ರಂಗ
ವಿಠಲ ನಿನ್ನ ದಯವಾಗಲಿ ಹರಿಯೆ II3II

Madhwantargata vedavyasa /ಮಧ್ವಾಂತರ್ಗತ ವೇದವ್ಯಾಸ ಕಾಯೊ

ಮಧ್ವಾಂತರ್ಗತ ವೇದವ್ಯಾಸ ಕಾಯೊ
ಶುದ್ಧ ಮೂರುತಿಯೆ ಸರ್ವೇಶ IIಪII

ಶುದ್ಧಮನದಲಿ ನಿನ್ನ ಭಜಿಸುವ ಭಕ್ತರಿಗೆ
ಬುದ್ಧ್ಯಾದಿಗಳ ಕೊಟ್ಟು ಸಲಹೊ ದೇವರ ದೇವ IIಅಪII

ದ್ವಾಪರದಲಿ ಒಬ್ಬ ಮುನಿಪ ತನ್ನ
ಕೋಪದಿಂದಲಿ ಕೊಡಲು ಶಾಪ
ಸ್ಥಾಪಿಸಲು ಜ್ಞಾನ ಲೋಪ
ಅಪಾರ ತತ್ತ್ವಸ್ವರೂಪ
ಶ್ರೀಪತಿಯೇ ಪೊರೆಯೆಂದು ಮೊರೆಯಿಡೆ
ಪಾಪವಿರಹಿತಳಾದ ಯಮುನೆಯ
ದ್ವೀಪದಲಿ ಅಂಬಿಗರ ಹೆಣ್ಣಿನ
ರೂಪಗೊಲಿದವನಲ್ಲಿ ಜನಿಸಿದಿ II೧II

ವೇದವಾದಿಗಳೆಲ್ಲ ಕೆಡಲು ತತ್ತ್ವ-
ವಾದಿ ಜನರು ಬಾಯಿ ಬಿಡಲು
ಮೇದಿನಿ ಸುರರು ಕಂಗೆಡಲು ನಾನಾ
ವೇದವಿಭಾಗ ರಚಿಸಲು
ಮೋದದಿಂದ ತದರ್ಥಬೋಧಕ
ವಾದಶಾಸ್ತ್ರ ಪುರಾಣ ರಚಿಸಿ ವಿ-
ವಾದಗಳ ನಿರ್ವಾದ ಮಾಡಿದ
ಸಾಧುವಂದಿತಬಾದರಾಯಣII ೨II

ಸುಮತಿಗಳಿಗೆ ಬೋಧಿಸಿದೆ ಮಿಕ್ಕ
ಕುಮತಿಗಳನು ಭೇದಿಸಿದೆ
ಕ್ರಿಮಿಯಿಂದ ರಾಜ್ಯವಾಳಿಸಿದ ಜಗ-
ತ್ಸ್ವಾಮಿ ನೀನೆಂದು ತೋರಿಸಿದೆ
ವಿಮಲರೂಪನೆ ಕಮಲನಾಭನೆ
ರಮೆಯ ಅರಸನೆ ರಮ್ಯಚರಿತನೆ
ಮಮತೆಯಲಿ ಕೊಡು ಕಾಮಿತಾರ್ಥವ
ನಮಿಸುವೆನು ಹಯವದನಮೂರುತಿ II೩II