ಹರಿಕಥಾಮೃತಸಾರದ ವಿಘ್ನೇಶ್ವರಸ್ತೋತ್ರಸಂಧಿ
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು
ಪೇಳುವೆ ಪರಮ ಭಗವದ್ ಭಕ್ತರಿದನಾದರದಿ ಕೇಳುವುದು
ಶ್ರೀಶನಂಘ್ರಿಸರೋಜಭೃಂಗ ಮಹೇಶಸಂಭವ ಮನ್ಮನದೊಳು
ಪ್ರಕಾಶಿಸನುದಿನ ಪ್ರಾರ್ಥಿಸುವೆ ಪ್ರೇಮಾತಿಶಯದಿಂದ
ನೀ ಸಲಹು ಸಜ್ಜನರ ವೇದ ವ್ಯಾಸ ಕರುಣಾಪಾತ್ರ ಮಹದಾ
ಕಾಶಪತಿ ಕರುಣಾಳು ಕೈಪಿಡಿದೆಮ್ಮನುದ್ಧರಿಸು ೧
ಏಕದಂತ ಇಭೇಂದ್ರಮುಖ ಚಾಮೀಕರಕೃತಭೂಷಣಾಂಗ
ಕೃಪಾಕಟಾಕ್ಷದಿ ನೋಡು ವಿಜ್ಞಾಪಿಸುವೆನಿನಿತೆಂದು
ನೋಕನೀಯನ ತುತಿಸುತಿಪ್ಪ ವಿವೇಕಿಗಳ ಸಹವಾಸ ಸುಖಗಳ
ನೀ ಕರುಣಿಸುವುದೆಮಗೆ ಸಂತತ ಪರಮಕರುಣಾಳು ೨
ವಿಘ್ನರಾಜನೆ ದುರ್ವಿಷಯದೊಳು ಮಗ್ನವಾಗಿಹ ಮನವ
ಮಹದೋಷಘ್ನಂಘ್ರಿಸರೋಜಯುಗಳದಿ ಭಕ್ತಿಪೂರ್ವಕದಿ
ಲಗ್ನವಾಗಿಸು ನಿತ್ಯಾನರಕಭಯಾಗ್ನಿಗಳಿಗಾನಂಜೆ ಗುರುವರ
ಭಗ್ನಗೈಸೆನ್ನವಗುಣಗಳನು ಪ್ರತಿದಿವಸದಲ್ಲಿ ೩
ಧನಪ ವಿಷ್ವಕ್ಸೇನ ವೈದ್ಯಾಶ್ವಿನಿಗಳಿಗೆ ಸರಿಯೆನಿಪ
ಷಣ್ಮುಖನನುಜ ಶೇಷಶತಸ್ಥದೇವೋತ್ತಮ ವಿಯದ್ಗಂಗಾ
ವಿನುತ ವಿಶ್ವೋಪಾಸಕನೆ ಸನ್ಮನದಿ ವಿಜ್ಞಾಪಿಸುವೆ ಲಕುಮೀ
ವನಿತೆಯರಸನ ಭಕ್ತಿಜ್ಞಾನವ ಕೊಟ್ಟು ಸಲುಹುವುದು ೪
ಚಾರುದೇಷ್ಣಾಹ್ವಯನೆನಿಸಿ ಅವತಾರಮಾಡಿದೆ ರುಕ್ಮಿಣೀಯಲಿ
ಗೌರಿಯರಸನ ವರದಿ ಉದ್ಧಟರಾದ ರಾಕ್ಷಸರ
ಶೌರಿಯಾಜ್ಞದಿ ಸಂಹರಿಸಿ ಭೂಭಾರವಿಳುಹಿದ ಕರುಣಿ
ತ್ವತ್ಪಾದಾರವಿಂದಕೆ ನಮಿಪೆ ಕರುಣಿಪುದೆಮಗೆ ಸನ್ಮತಿಯ ೫
ಶೂರ್ಪಕರ್ಣ ವಿರಾಜಿತೇಂದುವ ದರ್ಪಹರ ಉದಿತಾರ್ಕ ಸನ್ನಿಭ
ಸರ್ಪವರ ಕಟಿಸೂತ್ರ ವೈಕೃತಗಾತ್ರ ಸುಚರಿತ್ರ
ಸ್ವರ್ಪಿತಾಂಕುಶಪಾಶಕರ ಖಳ ದರ್ಪಭಂಜನ ಕರ್ಮಸಾಕ್ಷಿಗ
ತರ್ಪಕನು ನೀನಾಗಿ ತೃಪ್ತಿಯ ಪಡಿಸು ಸಜ್ಜನರ ೬
ಖೇಶಪರಮಸುಭಕ್ತಿಪೂರ್ವಕ ವ್ಯಾಸಕೃತಗ್ರಂಥಗಳನರಿತು
ಪ್ರಯಾಸವಿಲ್ಲದೆ ಬರೆದು ವಿಸ್ತರಿಸಿದೆಯೊ ಲೋಕದೊಳು
ಪಾಶಪಾಣಿಯೆ ಪ್ರಾರ್ಥಿಸುವೆನುಪದೇಶಿಸೆನಗದರರ್ಥಗಳ
ಕರುಣಾಸಮುದ್ರ ಕೃಪಾಕಟಾಕ್ಷದಿ ನೋಡಿ ಪ್ರತಿದಿನದಿ೭
ಶ್ರೀಶನತಿನಿರ್ಮಲಸುನಾಭೀದೇಶವಸ್ಥಿತ ರಕ್ತಗಂಧಾ
ತೀಶೋಭಿತಗಾತ್ರ ಲೋಕಪವಿತ್ರ ಸುರಮಿತ್ರ
ಮೂಷಿಕವರವಾಹನ ಪ್ರಾಣಾವೇಶಯುತ ಪ್ರಖ್ಯಾತ ಪ್ರಭು
ಪೂರೈಸು ಭಕ್ತರು ಬೇಡಿದಿಷ್ಟಾರ್ಥಗಳ ಪ್ರತಿ ದಿನದಿ ೮
ಶಂಕರಾತ್ಮಜ ದೈತ್ಯರಿಗತಿಭಯಂಕರಗತಿಗಳೀಯಲೋಸುಗ
ಸಂಕಟಚತುರ್ಥಿಗನೆನಿಸಿ ಅಹಿತಾರ್ಥಗಳ ಕೊಟ್ಟು
ಮಂಕುಗಳ ಮೋಹಿಸುವೆ ಚಕ್ರಧರಾಂಕಿತಗೆ ಅತಿಪ್ರಿಯ ತ್ವತ್ಪದ
ಪಂಕಜಗಳಿಗೆರಗಿ ಬಿನ್ನಯಿಸುವೆನು ಪಾಲಿಪುದು ೯
ಸಿದ್ಧವಿದ್ಯಾಧರಗಣಸಮಾರಾಧ್ಯ ಚರಣಸರೋಜ ಸರ್ವಸು
ಸಿದ್ಧಿದಾಯಕ ಶೀಘ್ರದಿಂದಾಲಿಪುದು ಬಿನ್ನಪವ
ಬುದ್ಧಿವಿದ್ಯಾಜ್ಞಾನಬಲ ಪರಿಶುದ್ಧಭಕ್ತಿವಿರಕ್ತಿನಿರುತನ
ವದ್ಯನ ಸ್ಮೃತಿಲೀಲೆಗಳ ಸುಸ್ತವನ ವದನದಲಿ ೧೦
ರಕ್ತವಾಸದ್ವಯವಿಭೂಷಣ ಉಕ್ತಿ ಲಾಲಿಸು ಪರಮಭಗವ
ದ್ಭಕ್ತವರ ಭವ್ಯಾತ್ಮ ಭಾಗವತಾದಿಶಾಸ್ತ್ರದಲಿ
ಸಕ್ತವಾಗಲಿ ಮನವು ವಿಷಯ ವಿರಕ್ತಿ ಪಾಲಿಸು ವಿದ್ವದಾದ್ಯ
ವಿಮುಕ್ತನೆಂದೆನಿಸೆನ್ನ ಭವಭಯದಿಂದ ಕರುಣದಲಿ ೧೧
ಶುಕ್ರಶಿಷ್ಯರ ಸಂಹರಿಪುದಕೆ ಶಕ್ರ ನಿನ್ನನು ಪೂಜಿಸಿದನು
ಉರುಕ್ರಮ ಶ್ರೀರಾಮಚಂದ್ರನು ಸೇತುಮುಖದಲ್ಲಿ
ಚಕ್ರವರ್ತಿಪ ಧರ್ಮರಾಜನು ಚಕ್ರಪಾಣಿಯ ನುಡಿಗೆ ಭಜಿಸಿದ
ವಕ್ರತುಂಡನೆ ನಿನ್ನೊಳೆಂತುಂಟೋ ಈಶನನುಗ್ರಹವು ೧೨
ಕೌರವೇಂದ್ರನು ನಿನ್ನ ಭಜಿಸದ ಕಾರಣದಿ ನಿಜಕುಲಸಹಿತ
ಸಂಹಾರವೈದಿದ ಗುರುವರ ವೃಕೋದರನ ಗದೆಯಿಂದ
ತಾರಕಾಂತಕನನುಜ ಎನ್ನ ಶರೀರದೊಳು ನೀನಿಂತು ಧರ್ಮ
ಪ್ರೇರಕನು ನೀನಾಗಿ ಸಂತೈಸೆನ್ನ ಕರುಣದಲಿ ೧೩
ಏಕವಿಂಶತಿ ಮೋದಕಪ್ರಿಯ ಮೂಕರನು ವಾಗ್ಮಿಗಳ ಮಾಳ್ಪೆ
ಕೃಪಾಕರೇಶ ಕೃತಜ್ಞ ಕಾಮದ ಕಾಯೊ ಕೈವಿಡಿದು
ಲೇಖಕಾಗ್ರಣಿ ಮನ್ಮನದ ದುರ್ವ್ಯಾಕುಲವ ಪರಿಹರಿಸು ದಯದಿ
ಪಿನಾಕಿಭಾರ್ಯಾತನುಜ ಮೃದ್ಭವ ಪ್ರಾರ್ಥಿಸುವೆ ನಿನ್ನ ೧೪
ನಿತ್ಯಮಂಗಲಚರಿತ ಜಗದುತ್ಪತ್ತಿಸ್ಥಿತಿಲಯನಿಯಮನ
ಜ್ಞಾನತ್ರಯಪ್ರದ ಬಂಧಮೋಚಕ ಸುಮನಸಾಸುರರ
ಚಿತ್ತವೃತ್ತಿಗಳಂತೆ ನಡೆವ ಪ್ರಮತ್ತನಲ್ಲ ಸುಹೃಜ್ಜನಾಪ್ತನ
ನಿತ್ಯದಲಿ ನೆನೆನೆನೆದು ಸುಖಿಸುವ ಭಾಗ್ಯ ಕರುಣಿಪುದು ೧೫
ಪಂಚಭೇದಜ್ಞಾನವರುಪು ವಿರಿಂಚಿಜನಕನ ತೋರು ಮನದಲಿ
ವಾಂಛಿತಪ್ರದ ಒಲುಮೆಯಿಂದಲಿ ದಾಸನೆಂದರಿದು
ಪಂಚವಕ್ತ್ರನ ತನಯ ಭವದೊಳುವಂಚಿಸದೆ ಸಂತಯಿಸು
ವಿಷಯದಿ ಸಂಚರಿಸಂದದಲಿ ಮಾಡು ಮನಾದಿಕರಣಗಳ ೧೬
ಏನು ಬೇಡುವುದಿಲ್ಲ ನಿನ್ನ ಕುಯೋನಿಗಳು ಬರಲಂಜೆ ಲಕ್ಷ್ಮೀ
ಪ್ರಾಣಪತಿತ್ತ್ವೇಶರಿಂದೊಡಗೂಡಿ ಗುಣಕಾರ್ಯ ತಾನೆ ಮಾಡುವನೆಂಬ
ಈ ಸು ಜ್ಞಾನವೆ ಕರುಣಿಸುವುದೆಮಗೆ
ಮಹಾನುಭಾವ ಮುಹುರ್ಮುಹು ಪ್ರಾರ್ಥಿಸುವೆನಿನಿತೆಂದು ೧೭
ನಮೋ ನಮೋ ಗುರುವರ್ಯ ವಿಬುಧೋತ್ತಮ ವಿವರ್ಜಿತನಿದ್ರ ಕಲ್ಪ
ದ್ರುಮನೆನಿಪೆ ಭಜಕರಿಗೆ ಬಹುಗುಣಭರಿತ ಶುಭಚರಿತ
ಉಮೆಯ ನಂದನ ಪರಿಹರಿಸಹಂ ಮಮತೆ ಬುದ್ಧ್ಯಾದಿಂದ್ರಿಯಗಳಾಕ್ರಮಿಸಿ
ದಣಿಸುತಲಿಹವು ಭವದೊಳಗಾವಕಾಲದಲಿ ೧೮
ಜಯಜಯತು ವಿಘ್ನೇಶ ತಾಪತ್ರಯವಿನಾಶನ ವಿಶ್ವಮಂಗಳ
ಜಯಜಯತು ವಿದ್ಯಾಪ್ರದಾಯಕ ವೀತಭಯಶೋಕ
ಜಯಜಯತು ಚಾರ್ವಾಂಗ ಕರುಣಾನಯನದಿಂದಲಿ ನೋಡಿ
ಜನ್ಮಾಮಯಮೃತಿಗಳನು ಪರಿಹರಿಸು ಭಕ್ತರಿಗೆ ಭವದೊಳಗೆ ೧೯
ಕಡುಕರುಣಿ ನೀನೆಂದರಿದು ಹೇರೊಡಲ ನಮಿಸುವೆ ನಿನ್ನಡಿಗೆ
ಬೆಂಡಿಡದೆ ಪಾಲಿಸು ಪರಮ ಕರುಣಾಸಿಂಧು ಎಂದೆಂದು
ನಡುನಡುವೆ ಬರುತಿಪ್ಪ ವಿಘ್ನವತಡೆದು ಭಗವನ್ನಾಮಕೀರ್ತನೆ
ನುಡಿದು ನುಡಿಸು ಎನ್ನಿಂದ ಪ್ರತಿದಿವಸದಲಿ ಮರೆಯದಲೆ ೨೦
ಏಕವಿಂಶತಿ ಪದಗಳೆನಿಸುವ ಕೋಕನದ ನವಮಾಲಿಕೆಯ
ಮೈನಾಕಿತನಯಾಂತರ್ಗತ ಶ್ರೀಪ್ರಾಣಪತಿಯೆನಿಪ
ಶ್ರೀಕರಜಗನ್ನಾಥವಿಠ್ಠಲ ಸ್ವೀಕರಿಸಿ ಸ್ವರ್ಗಾಪವರ್ಗದಿ
ತಾ ಕೊಡಲಿ ಸೌಖ್ಯಗಳ ಭಕುತರಿಗಾವ ಕಾಲದಲಿ ೨
ಶ್ರೀಕೃಷ್ಣಾರ್ಪಣಮಸ್ತು..
8 comments:
It is not possible to learn and recite on regular basis this sorta as it is in Kannada. Is there it's translation in Sanskrit? If so can it be posted fo the benefit of more.?
Lt Col GV Sreedhar.
Bangalore.
Sreedhar, it is posibl to learn and recite d above sandhi in kannada...u can search on youtube as: "HKS ganapathi sandhi"....Anant kulkarni has sung it so beautifully.
Here is the link of it. Beautifully sung. Please listen and learn
https://www.youtube.com/watch?v=PfejyxKQljo&list=PLn30dHDkI7o6PQ7VSKHbA-_ndZDISUUXn
Do you want me to translate in either Hindi are English
I took about a month to regularly byheart this and this I did about 18 yrs ago. Just needs time and effort and intention to byheart
Good result if you chant regularly.
Good result if chanted regularly.
Very nice.Thanks for putting this online.
Post a Comment