ಆರು ಬಾಳಿದರೇನು ಆರು ಬದುಕಿದರೇನು
ನಾರಯಣನ ಸ್ಮರಣೆ ನಮಗಿಲ್ಲದನಕ IIಪ II
ಉಣ್ಣಬರದವರಲ್ಲಿ ಊರೂಟವಾದರೆ ಏನು
ಹಣ್ಣು ಬಿಡದ ಮರಗಳು ಹಾಳಾದರೇನು
ಕಣ್ಣಿಲ್ಲದವಗಿನ್ನು ಕನ್ನಡಿಯಿದ್ದು ಫಲವೇನು
ಪುಣ್ಯವಿಲ್ಲದವನ ಪ್ರೌಢಿಮೆ ಮೆರೆದರೇನು II೧II
ಅಕ್ಕರಿಲ್ಲದವರಿಗೆ ಮಕ್ಕಳಿದ್ದು ಫಲವೇನು
ಹೊಕ್ಕು ನಡೆಯದ ನಂಟತನದೊಳೇನು
ರೊಕ್ಕವಿಲ್ಲದವಗೆ ಬಂಧುಗಳು ಇದ್ದರೇನು
ಮರ್ಕಟನ ಕೈಯೊಳಗೆ ಮಾಣಿಕ್ಯವಿದ್ದರೇನುII ೨II
ಅಲ್ಪದೊರೆಗಳ ಜೀತ ಎಷ್ತು ಮಾಡಿದರೇನು
ಬಲ್ಪಂಥವಿಲ್ಲದವನ ಬಾಳ್ವೆಯೇನು
ಕಲ್ಪಕಲ್ಪಿತ ಕಾಗಿನೆಲೆಯಾದಿ ಕೇಶವನ
ಸ್ವಲ್ಪವೂ ನೆನೆಯದ ನರನಿದ್ದರೇನು II೩II
No comments:
Post a Comment